ಬ್ರೇಕಿಂಗ್ ನ್ಯೂಸ್

ತಬ್ಲಿಘೀಗಳಿಗೆ ರಕ್ಷಣೆ ನೀಡಿದ ಆರೋಪ : ಜಮೀರ್ ಅಹಮ್ಮದ್ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಬೆಂಗಳೂರು, ಏ.23- ಹತ್ತೊಂಬತ್ತು ಮಂದಿ ವಿದೇಶಿ ತಬ್ಲಿಘೀಗಳಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಶಾಸಕ ಜಮೀರ್ ಅಹಮ್ಮದ್ ಖಾನ್, ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಹಾಗೂ ಸುಬಾನಿಯಾ ಮಸೀದಿಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರಿಗೆ ದೂರು ನೀಡಿದ್ದಾರೆ.

ಪಾದರಾಯನಪುರ ವಾರ್ಡ್‍ನಲ್ಲಿರುವ ಸುಬಾನಿಯಾ ಮಸೀದಿಯಲ್ಲಿ ಇಂಡೋನೇಷ್ಯಾದ 10 ಮಂದಿ ಹಾಗೂ ಕಿರ್ಗಿಸ್ತಾನದ 9 ಮಂದಿ ತಬ್ಲಿಘೀಗಳು ತಂಗಲು ಅವಕಾಶ ನೀಡಲಾಗಿತ್ತು. ಮಸೀದಿಯಲ್ಲಿ ತಲೆಮರೆಸಿಕೊಂಡಿದ್ದ 19 ಮಂದಿ ತಬ್ಲಿಘೀಗಳ ವಿರುದ್ಧ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ.
ಈ ತಬ್ಲಿಘೀಗಳಿಂದಾಗಿ ಪಾದರಾಯನಪುರದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದ್ದು, ಮಸೀದಿ ಸಮೀಪದ ವೃದ್ಧೆಯೊಬ್ಬರು ಸೋಂಕಿಗೆ ಬಲಿಯಾಗಿದ್ದು, ಇನ್ನಿತರ ಹಲವಾರು ಕೊರೊನಾ ಪೀಡಿತರಾಗಿದ್ದಾರೆ.ತಲೆಮರೆಸಿಕೊಂಡಿದ್ದ 19 ತಬ್ಲಿಘೀಗಳ ವೀಸಾ ಅವಧಿ ಮುಗಿದಿದ್ದರೂ ಅವರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದು ದೇಶದ್ರೋಹದ ಕಾರ್ಯವಾಗಿದೆ.
ತಬ್ಲಿಘೀಗಳು ತಮ್ಮ ಕ್ಷೇತ್ರದಲ್ಲೇ ಇದ್ದರೂ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಗೂ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಅವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್.ರಮೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.

About the author

Mallu Bolanavar