ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಮೇಲೆ ಕಿಡಿಗೇಡಿಗಳ ಹಲ್ಲೆ

ಚಿಕ್ಕೋಡಿ :     ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೋನಾ ವೈರಸ್ 4 ಪ್ರಕರಣಗಳು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೊದಲ ಹಂತ ಅಂದರೆ ಪ್ರಾಥಮಿಕವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದ 40 ಜನರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಇನ್ನೂ ಎರಡನೇ ಹಂತದಲ್ಲಿ ಇರುವ ಜನರನ್ನು ಪತ್ತೆ ಹಚ್ಚಲು ಹಾಗೂ ಆರೋಗ್ಯ ವಿಚಾರದಲ್ಲಿ ಸಮೀಕ್ಷೆ ಕಾರ್ಯ ನಡೆಸಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮುಂದಾದ ಸಂದರ್ಭದಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ವಾಗಿತ್ತು. 
ಈ ಹಿನ್ನಲೆಯಲ್ಲಿ ಕುಡಚಿ ಪಟ್ಟಣಕ್ಕೆ *ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ . ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ  ಯವರು ಭೇಟಿ ನೀಡಿ, ಪೊಲೀಸ್ ಠಾಣೆ ಹೊರ ಭಾಗದಲ್ಲಿ ಸಭೆ ನಡೆಸಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಭೇಟಿಯಾಗಿ, ಸಮಾಧಾನ ಪಡಿಸಿ ಧೈರ್ಯ ತುಂಬಿ ಹಾಗೂ ಮುಸ್ಲಿಂ ಸಮಾಜದ ಮೌಲಿಗಳು ಹಾಗೂ ಮುಖಂಡರೊಂದಿಗೆ ಮಾತುಕತೆ ನಡೆಸಿ, ಕುಡಚಿ ಪಟ್ಟಣವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿರುವುದರಿಂದ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಎಲ್ಲರ ಮೇಲೆ ನಿಗಾ ಇಡುವ ಅಗತ್ಯತೆ ಕುರಿತು  ಸೂಕ್ತ ತಿಳಿವಳಿಕೆ ಹೇಳಿ ಮನವರಿಕೆ ಮಾಡಿ, ಅನಗತ್ಯ ತೊಂದರೆ ನಡೆಸಿದರೆ ಅಗತ್ಯ ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಪಿ.ರಾಜೀವ, ಅಥಣಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಎಸ್.ವಿ ಗಿರೀಶ್,  ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
Share
WhatsApp
Follow by Email