ನಿರ್ಬಂಧದ ಆದೇಶವನ್ನು ತಾವೇ ಉಲ್ಲಂಘಿಸಿ ಅದ್ಧೂರಿ ಮದುವೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ

ಬೆಳಗಾವಿ : ವಿಶ್ವವನ್ನೇ ಕಾಡಿದ ಅತ್ಯಂತ ಭಯಾನಕ ಕೊರೋನ ವೈರಸ್ ಹರಡುವ ಭೀತಿ ಇರುವುದರಿಂದಾಗಿ ರಾಜ್ಯ ಸರ್ಕಾರವು ವಿಧಿಸಿರುವ ನಿರ್ಬಂಧದ ನಡುವೆಯೂ ಸ್ವತಃ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೊಳ್ಳುವ ಮೂಲಕ ತಮ್ಮ ಆದೇಶವನ್ನೇ ತಾವೇ ಉಲ್ಲಂಘಿಸಿದ್ದಾರೆ.

ಅವರು ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ಡಾ.ಪೂಜಾ ವಿವಾಹವು ಖಾನಾಪುರ ರಸ್ತೆ ಶಗುನ್‌ ಗಾರ್ಡನ್‌ನಲ್ಲಿ ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಆದೇಶವನ್ನು ತಾವೇ ಉಲ್ಲಂಘಿಸಿದ್ದಾರೆ. ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜವಳಿ ಸಚಿವ ಶ್ರೀಮಂತ ಪಾಟೀಲ, ಶಾಸಕರು, ಜನಪ್ರತಿನಿಧಿಗಳು ಹಾಗೂ ಇಡೀ ಜಿಲ್ಲಾಡಳಿತವೇ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗರಿಷ್ಠ 100 ಮಂದಿಗೆ ಸೀಮಿತಗೊಳಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವೊಲಿಸುವ ಕೆಲಸವನ್ನು ಮಾಡಬೇಕಾಗಿದ್ದ ಅಧಿಕಾರಿಗಳು ಕೂಡ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಮಾತ್ರ ಅಚ್ಚರಿ.

ಹೆಚ್ಚಿನ ಜನಸಂದಣಿಯ ಕಾರ್ಯಕ್ರಮಗಳನ್ನು ನಿಯಂತ್ರಿಸಬೇಕು ಎನ್ನುವುದು ಸರ್ಕಾರದ ಆದೇಶ. ಆದರೆ, ಬೆಳಿಗ್ಗೆಯಿಂದಲೂ ಜನರು ಸೇರುತ್ತಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಗಣೇಶ ಹುಕ್ಕೇರಿ, ಮಹೇಶ ಕುಮಠಳ್ಳಿ, ಆನಂದ ಮಾಮನಿ, ಶಾಮನೂರು ಶಿವಶಂಕರಪ್ಪ, ಆರ್‌.ಬಿ. ತಿಮ್ಮಾಪೂರ, ವಿವಿಧ ಮಠಗಳ ಮಠಾಧೀಶರು, ಪ್ರತಿಪಕ್ಷಗಳ ನಾಯಕರು, ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು ಎಂದು ನಿರ್ಬಂಧ ವಿಧಿಸಲಾಗಿದೆ. ಮದುವೆಗೂ ಹೆಚ್ಚಿನವರು ಸೇರಬಾರದು. ನನ್ನ ಹುಬ್ಬಳ್ಳಿ ಪ್ರವಾಸ ಮೊದಲೇ ನಿಗದಿಯಾಗಿತ್ತು. ಈ ಭಾಗಕ್ಕೆ‌ ಬರುತ್ತಿರುವ ಕಾರಣ ಕವಟಗಿಮಠ ಪುತ್ರಿ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ’ ಎಂದು ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ. ಇನ್ನು ಮುಖ್ಯಮಂತ್ರಿಗಳೇ ಗಂಭೀರವಾಗಿರುವ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಆದೇಶವನ್ನು ಹೊರಡಿಸುವ ನೈತಿಕತೆಯ ಬಗ್ಗೆ ಬರೆದುಕೊಂಡಿದ್ದಾರೆ

ವರದಿ : ಮಲ್ಲು ಬೋಳನವರ

Share
WhatsApp
Follow by Email